ಹಿಂದೂಸ್ತಾನ್ ಮಷೀನ್ ಟೂಲ್ಸ್ - ಬಹುಮುಖ ತಾಂತ್ರಿಕ ಸಮುಚ್ಛಯ
	ಕೈಗಾರಿಕಾ ಕ್ಷೇತ್ರದಲ್ಲಿನ ಸ್ವಾವಲಂಬನೆಯ ನಿಟ್ಟಿನಲ್ಲಿ ಪ್ರಧಾನಿ ಶ್ರೀ ಜವಹರಲಾಲ್ ನೆಹರುರವರ ಕನಸಿನ ಮೇರೆಗೆ 1953ರಲ್ಲಿ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾಗಿ ಸ್ಥಾಪಿತವಾದ ಹಿಂದೂಸ್ತಾನ್ ಮಷೀನ್ ಟೂಲ್ಸ್ ಸಂಸ್ಥೆಯು ಈಗ ಎಚ್.ಎಮ್.ಟಿ ಎಂದು ಖ್ಯಾತಿ ಗಳಿಸಿದ್ದು ಲೋಹ ಛೇದನಾ ಮತ್ತು ಲೋಹ ಪರಿವರ್ತನಾ ಯಂತ್ರೋಪಕರಣಗಳು, ಕೈ ಗಡಿಯಾರ, ಟ್ರಾಕ್ಟರುಗಳು, ಮುದ್ರಣಾ ಯಂತ್ರಗಳು, ಪ್ಲಾಸ್ಟಿಕ್ ಸಂಸ್ಕರಣಾ ಯಂತ್ರಗಳು, ಸಿ.ಎನ್.ಸಿ ವ್ಯವಸ್ಥಾ ಸಲಕರಣಗಳು, ಬಾಲ್ ಸ್ಕ್ರ್ಯೂ, ಬೇರಿಂಗ್ಸ್ ಮೊದಲಾದ ವಿವಿಧ ತಾಂತ್ರಿಕ ಉತ್ಪನ್ನಗಳನ್ನು ತಯಾರಿಸುತ್ತಿದೆ.

ಯಂತ್ರೋಪಕರಣಗಳನ್ನು ತಯಾರಿಸಲು 1953ರಲ್ಲಿ ಆರಂಭಿಸಿದ ಸಂಸ್ಥೆಯು ಈ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಉತ್ಪನ್ನಾಶ್ರೇಣಿಯನ್ನು ಹೊಂದಿದೆ. ಲೋಹ ಛೇದನಾ ಮತ್ತು ಲೋಹ ಪರಿವರ್ತನಾ ಕ್ಷೇತ್ರದಲ್ಲಿ ಸಾಮಾನ್ಯ ಉದ್ದೇಶಿತ ಯಂತ್ರಗಳು, ವಿಶೇಷ ಉದ್ದೇಶಿತ ಯಂತ್ರಗಳು, ಕಂಪ್ಯೂಟರ್ ನಿಯಂತ್ರಿತ ಯಂತ್ರಗಳು, ಲೋಹದ ಎರಕ ಯಂತ್ರಗಳು ಮೊದಲಾದ ವಿವಿಧ ಯಂತ್ರಗಳನ್ನು ತನ್ನ 9 ಉತ್ಪಾದನಾ ಘಟಕಗಳಲ್ಲಿ ತಯಾರಿಸುತ್ತಿದೆ.

	ಮೊದಲು ಎಚ್‍ಎಮ್‍ಟಿ ಅಂತಾರಾಷ್ಟ್ರೀಯ ಸಂಸ್ಥೆಯನ್ನು ಅಂಗ ಸಂಸ್ಥೆಯಾಗಿ ಹೊಂದಿದ್ದ ಎಚ್.ಎಮ್.ಟಿ, 2001ರಲ್ಲಿ ತನ್ನ ಪ್ರಮುಖ ವಾಣಿಜ್ಯ ಘಟಕಗಳನ್ನು ವಿವಿಧ ಸಂಪೂರ್ಣ ಸ್ವಾಮ್ಯದ ಸಂಸ್ಥೆಗಳನ್ನಾಗಿ ವಿಭಾಗಿಸಿತು. ಅವುಗಳು :

ಕ್ರ.ಸಂ.
ಸಂಪೂರ್ಣ ಸ್ವಾಮ್ಯದ ಸಂಸ್ಥೆ
ಉತ್ಪನ್ನ
ಸ್ಥಳ

1
ಎಚ್‍ಎಮ್‍ಟಿ ಅಂತಾರಾಷ್ಟ್ರೀಯ ನಿಯಮಿತ
ಅಂತಾರಾಷ್ಟ್ರೀಯ ವಹಿವಾಟು
ಬೆಂಗಳೂರು

2
ಎಚ್‍ಎಮ್‍ಟಿ ಯಂತ್ರೋಪಕರಣ ನಿಯಮಿತ
ಯಂತ್ರೋಪಕರಣ
ಬೆಂಗಳೂರು

3
ಎಚ್‍ಎಮ್‍ಟಿ ಕೈ ಗಡಿಯಾರ ನಿಯಮಿತ
ಕೈ ಗಡಿಯಾರ
ಬೆಂಗಳೂರು

4
ಚಿನಾರ್ ಕೈ ಗಡಿಯಾರ ಸಂಸ್ಥೆ ನಿಯಮಿತ
ಕೈ ಗಡಿಯಾರ
ಶ್ರೀನಗರ

5
ಎಚ್‍ಎಮ್‍ಟಿ ಬೇರಿಂಗ್ಸ್ ನಿಯಮಿತ
ಬೇರಿಂಗ್ಸ್
ಹೈದರಾಬಾದ್

6
ಪ್ರಾಗಾ ಟೂಲ್ಸ್ ನಿಯಮಿತ
ಯಂತ್ರೋಪಕರಣ
ಹೈದರಾಬಾದ್

ಟ್ರ್ಯಾಕ್ಟರ್ ವಾಣಿಜ್ಯ ಘಟಕ ಎಚ್‍ಎಮ್‍ಟಿ ಸಂಸ್ಥೆಯ ಪ್ರಧಾನ ಕಛೇರಿಯ ವ್ಯಾಪ್ತಿಯಲ್ಲಿ ಇರುತ್ತದೆ. ಪ್ರಪಂಚದ ಖ್ಯಾತನಾಮ ಸಂಸ್ಥೆಗಳೊಂದಿಗೆ ಕೈಜೋಡಿಸಿ ತಯಾರಿಸಲ್ಪಟ್ಟ ಮೇಲ್ಕಂಡ ಉತ್ಪನ್ನಗಳು ಸತತ ವಿಕಾಸದಿಂದ ಗುಣವತ್ತತೆಯಲ್ಲಿ ಮತ್ತು ಉತ್ಪಾದಕತೆಯಲ್ಲಿ ಅಭಿವೃದ್ಧಿಯನ್ನು ಕಾಣುತ್ತಿವೆ.

ಎಚ್‍ಎಮ್‍ಟಿ ಯಂತ್ರೋಪಕರಣ ನಿಯಮಿತ

	ಎಚ್‍ಎಮ್‍ಟಿ ಸಂಸ್ಥೆ ಮತ್ತು ಈಗ ಎಚ್‍ಎಮ್‍ಟಿ ಯಂತ್ರೋಪಕರಣ ನಿಯಮಿತ ಸಂಸ್ಥೆಯು ದೇಶದಲ್ಲಿನ ಪ್ರಾಯಶಃ ಎಲ್ಲ ಕೈಗಾರಿಕಾ ಕ್ಷೇತ್ರಗಳಲ್ಲದೇ, ಉತ್ಪಾದನೆ, ಸಾರಿಗೆ, ರೈಲ್ವೇ, ವಿಮಾನಯಾನ, ಅಣುಶಕ್ತಿ, ಅಂತರಿಕ್ಷವೇ ಮೊದಲಾದ ವಿವಿಧ ರಂಗಗಳ ಮತ್ತು ಎಲ್ಲ ಕೈಗಾರಿಕೆಗಳ ಬೇಡಿಕೆಗಳನ್ನು ಪೂರೈಸುವುದು ಮಾತ್ರವಲ್ಲದೇ, ದೇಶದ ಸರ್ವಾಂಗೀಣ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸುತ್ತಾ ಬಂದಿದೆ. ಹಾಗೂ ದೇಶದಲ್ಲಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಮಗ್ರ ಬೆಳವಣಿಗೆಯತ್ತ, ಈ ಕ್ಷೇತ್ರದಲ್ಲಿ ಅತ್ಯವಶ್ಯಕ ತಾಂತ್ರಿಕ ಕುಶಲತೆ ಮತ್ತು ನೈಪುಣ್ಯತೆಯನ್ನು ಉನ್ನತಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.

	ಇನ್ನೊಂದು ಮಹತ್ವದ ವಿಷಯವೆಂದರೆ ಕೇವಲ ಉತ್ಪನ್ನಗಳಿಗಾಗಿ ಮಾತ್ರ ಹೊರ ರಾಷ್ಟ್ರಗಳ ಸಹಯೋಗವನ್ನು ಪಡೆದ ಎಚ್‍ಎಮ್‍ಟಿ ತನ್ನೆಲ್ಲ ಘಟಕಗಳನ್ನು ತನ್ನದೇ ಆದ ತಾಂತ್ರಿಕತೆಯಿಂದ ನಿರ್ಮಿಸಿತು. ಸಂಸ್ಥೆಯ ಈ ಅನುಭವ, ಎಚ್‍ಎಮ್‍ಟಿ ಅಂತರರಾಷ್ಟ್ರೀಯ ಸಂಸ್ಥೆಯು ಹೊರ ರಾಷ್ಟ್ರಗಳಲ್ಲಿ ಅನೇಕ ತಾಂತ್ರಿಕ ಯೋಜನೆಗಳನ್ನು ನಿರ್ಮಿಸಲು ಸಹಕಾರಕ್ಕೆ ಬಂದಿತು. ಎಚ್‍ಎಮ್‍ಟಿ ಯಂತ್ರೋಪಕರಣ ನಿಯಮಿತ ಸಂಸ್ಥೆಯ ಉತ್ಪಾದನಾ ವ್ಯಾಪ್ತಿ ಈ ರೀತಿ ಇದೆ.

	ಲೋಹ ಛೇದನಾ		- ಸಾಮಾನ್ಯ ಉದ್ದೇಶಿತ ಯಂತ್ರೋಪಕರಣಗಳು
				- ವಿಶೇಷ ಉದ್ದೇಶಿತ ಯಂತ್ರೋಪಕರಣಗಳು
				- ಸಿ.ಎನ್.ಸಿ ನಿಯಂತ್ರಿತ ಯಂತ್ರೋಪಕರಣಗಳು

	ಲೋಹ ಪರಿವರ್ತನಾ	- ಉದ್ದೇಶಿತ ಸಾಮಾನ್ಯ ಹಾಗೂ ಸಿ.ಎನ್.ಸಿ ನಿಯಂತ್ರಿತ 
					ಯಂತ್ರೋಪಕರಣಗಳು

ಮುದ್ರಣಾ ಯಂತ್ರಗಳು, ಲೋಹ ಎರಕ ಯಂತ್ರಗಳು ಹಾಗೂ ಪ್ಲಾಸ್ಟಿಕ್ ಯಂತ್ರಗಳು :
	ಸಿ.ಎನ್.ಸಿ ನಿಯಂತ್ರಿತ ಯಂತ್ರೋಪಕರಣಗಳ ಉತ್ಪಾದನೆಯನ್ನು ಏಷ್ಯದಲ್ಲಿ ಮೊದಲ ಬಾರಿಗೆ ಆರಂಭಿಸಿದ ಹಿರಿಮೆಯನ್ನು ಹೊಂದಿರುವ ಈ ಸಂಸ್ಥೆಯು ಯಂತ್ರೋಪಕರಣ ಕ್ಷೇತ್ರದಲ್ಲಿ ಪ್ರಾಯಶಃ ವಿಶ್ವದಲ್ಲಿಯೇ ಅತ್ಯಂತ ಉತ್ಪಾದನಾ ವ್ಯಾಪ್ತಿಯನ್ನು ಹೊಂದಿರುವ ಸಂಸ್ಥೆಯಾಗಿದೆ.

	ಅಣುಶಕ್ತಿ ಇಂಧನಗಳನ್ನು ನಿರ್ವಹಿಸಬಲ್ಲ ಅನೇಕ ಯಂತ್ರಗಳ ವಿನ್ಯಾಸ ಮತ್ತು ತಯಾರಿಕಾ ಕ್ಷೇತ್ರದಲ್ಲಿ ವಿವಿಧ ಸಂಸ್ಥೆಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಿರುವ ಎಚ್‍ಎಮ್‍ಟಿ ಸಂಸ್ಥೆಯು ಈ ಅನುಭವದಿಂದ ಅಪಾಯಕಾರಿ ಪರಿಸರದಲ್ಲಿ ಸ್ವಚಾಲಿತ ಮತ್ತು ಸೂಕ್ಷ್ಮ ತಂತ್ರಜ್ಞಾನದ ಯಂತ್ರೋಪಕರಣ ಕ್ಷೇತ್ರದಲ್ಲಿ ಮುನ್ನಡೆಯುವ ಸಾಮಥ್ರ್ಯವನ್ನು ಹೊಂದಿದೆ.

ಎಚ್‍ಎಮ್‍ಟಿ ಕೈ ಗಡಿಯಾರ ನಿಯಮಿತ :
	ಪ್ರಧಾನಿ ನೆಹರುರವರ ಸ್ವಾವಲಂಬನೆಯ ಕನಸಿನ ಮೇರೆಗೆ 1961ರಲ್ಲಿ ಜಪಾನಿನ ಕೈಗಡಿಯಾರ ಕ್ಷೇತ್ರದಲ್ಲಿ ಖ್ಯಾತನಾಮ ಸಂಸ್ಥೆಯಾದ ಸಿಟಿಜನ್ ಸಂಸ್ಥೆಯ ಸಹಯೋಗದೊಂದಿಗೆ ಸ್ಥಾಪಿತವಾದ ಬೆಂಗಳೂರಿನ ಕೈಗಡಿಯಾರ ಘಟಕ ಬೆಂಗಳೂರಿನಲ್ಲಿ ಎರಡನೆಯ ಘಟಕ, ತುಮಕೂರು, ಉತ್ತರಪ್ರದೇಶದ ರಾಣೀಬಾಗ್ ಮತ್ತು ಕಾಶ್ಮೀರ ಕಣಿವೆಯ ಶ್ರೀನಗರದಲ್ಲಿ ಕ್ರಮವಾಗಿ ಉತ್ಪಾದನಾ ಘಟಕಗಳನ್ನು ಆರಂಭಿಸಿತು. ದೇಶದಲ್ಲಿ ಎಲ್ಲ ರೀತಿಯ ಕೈ ಗಡಿಯಾರಗಳ ಉತ್ಪಾದನೆಯನ್ನು ಪ್ರಪ್ರಥಮವಾಗಿ ನಿರ್ಮಿಸಿದ ಹಿರಿಮೆ ಎಚ್‍ಎಮ್‍ಟಿ ಕೈ ಗಡಿಯಾರ ವಾಣಿಜ್ಯ ಘಟಕದ್ದಾಗಿದೆ.

	ರಾಷ್ಟ್ರದ ಯುವ ಜನತೆಗೆ ಆಧುನಿಕತೆಯ ಮೆರುಗನ್ನು ಕೈಗಡಿಯಾರಗಳ ರೂಪದಲ್ಲಿ ನೀಡಿದ ಈ ಸಂಸ್ಥೆ ಅಂಧರಿಗಾಗಿ ಬ್ರೈಲ್ ಕೈಗಡಿಯಾರಗಳನ್ನು, ನರ್ಸ್‍ಗಳಿಗಾಗಿ, ಕ್ರೀಡಾಪಟುಗಳಿಗಾಗಿ, ಸೈನಿಕರಿಗಾಗಿ ಅನೇಕ ರೀತಿಯ ಗಡಿಯಾರಗಳನ್ನು ನೀಡಿದೆ.

	ದೇಶದ ಅತ್ಯಂತ ಖ್ಯಾತನಾಮವೆನಿಸಿದ ಎಚ್‍ಎಮ್‍ಟಿ ಕೈ ಗಡಿಯಾರ ಇಂದಿಗೂ ಸಹ ತನ್ನ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಕಾಯ್ದಿರಿಸಿಕೊಂಡು ಪ್ರಮುಖ ಬ್ರ್ಯಾಂಡ್ ಎನ್ನಿಸಿದೆ.
ಚಿನಾರ್ ಕೈ ಗಡಿಯಾರ ಸಂಸ್ಥೆ ನಿಯಮಿತ :

	ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಾಜಧಾನಿಯಾದ ಶ್ರೀನಗರದಲ್ಲಿ ಸ್ಥಾಪಿತಗೊಂಡ ಈ ಕೈಗಡಿಯಾರ ಘಟಕ, ಕ್ವಾಟ್ರ್ಜ್ ಗಡಿಯಾರಗಳನ್ನು ತಯಾರಿಸುತ್ತಿದೆ.
ಎಚ್‍ಎಮ್‍ಟಿ ಅಂತರರಾಷ್ಟ್ರೀಯ ಸಂಸ್ಥೆ :

	ಎಚ್‍ಎಮ್‍ಟಿ ಸಂಸ್ಥೆಯ ಸಂಪೂರ್ಣ ಸ್ವಾಯುತ್ತ ಸಂಸ್ಥೆಯಾದ ಎಚ್‍ಎಮ್‍ಟಿ ಅಂತರರಾಷ್ಟ್ರೀಯ ಸಂಸ್ಥೆಯು ಯಂತ್ರೋಪಕರಣಗಳು, ಕೈ ಗಡಿಯಾರಗಳು, ಟ್ರ್ಯಾಕ್ಟರುಗಳು, ವಿವಿಧ ತಾಂತ್ರಿಕ ಯೋಜನೆ ಮತ್ತು ಸೇವೆಗಳನ್ನು ರಫ್ತು ಮಾಡುತ್ತ ಬಂದಿದೆ.

	ಭಾರತ ಸರ್ಕಾರದ ಮಿನಿರತ್ನ ಮಾನ್ಯತೆ ಪಡೆದಿರುವ ಎಚ್‍ಎಮ್‍ಟಿ(ಐ) ಸಂಸ್ಥೆಯು, ಈಗಾಗಲೇ ಮಲೇಶ್ಯ, ಇಂಡೋನೇಶ್ಯ, ಮಾರಿಷಸ್, ಮಾಲ್ಡೀವ್ಸ್, ತುರ್ಕಮೆನಿಸ್ತಾನ್, ನೇಪಾಳ, ಕೇನ್ಯ, ಬೋಟ್ಸ್ವಾನ, ಜಾóಂಬಿಯ, ಇಥಿಯೋಪಿಯ, ಅಲ್ಜೀರಿಯ, ಸೆನೆಗಲ್, ಘಾನ ಮೊದಲಾದ ದೇಶಗಳಲ್ಲಿ ಪ್ರತಿಷ್ಠಿತ ತಾಂತ್ರಿಕ ದೋಷಗಳನ್ನು ನಿರ್ವಹಿಸಿದೆ. ಎಚ್‍ಎಮ್‍ಟಿ (ಐ) ಸಂಸ್ಥೆಯು ಆಫ್ಘನಿಸ್ತಾನ್ ರಾಷ್ಟ್ರದ ರಾಜಧಾನಿಯಾದ ಕಾಬೂಲ್‍ನಲ್ಲಿ ಯಶಸ್ವಿಯಾಗಿ ನಿರ್ಮಿಸಿದ ಸಾಮಾನ್ಯ ಸೌಲಭ್ಯ ಮತ್ತು ಸಲಕರಣಾ ಕೇಂದ್ರ ವನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರ ಸಚಿವಾಲಯವು ಆಫ್ಘನಿಸ್ತಾನ್ ಸರ್ಕಾರಕ್ಕೆ ಹಸ್ತಾಂತರಿಸಿತು. ಎಚ್‍ಎಮ್‍ಟಿ (ಐ) ಸಂಸ್ಥೆಯು ನೈಜೀರಿಯ ದೇಶದ ನೈಜೀರಿಯ ಯಂತ್ರೋಪಕರಣ ಸಂಸ್ಥೆಯ (ಎನ್.ಎಮ್.ಟಿ) ನವೀಕರಣದ ಆದೇಶ ಹಾಗೂ ತಾಜಿಕಿಸ್ತಾನದಲ್ಲಿ ಹಣ್ಣು ಪರಿಷ್ಕರಣಾ ಕೇಂದ್ರ ಮೊದಲಾದ ಹಲವಾರು ಯೋಜನೆಗಳನ್ನು ನಿರ್ವಹಿಸಿದೆ. ವಿವಿಧ ರಾಷ್ಟ್ರಗಳಲ್ಲಿ ತಾಂತ್ರಿಕ ತರಬೇತಿ ಕ್ಷೇತ್ರದಲ್ಲಿ ಅನೇಕ ಯೋಜನೆಗಳನ್ನು ರೂಪಿಸಿ ನಿರ್ಮಿಸಿರುವ ಎಚ್‍ಎಮ್‍ಟಿ (ಐ) ಸಂಸ್ಥೆಯು ಈಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಸಂಸ್ಥೆಯು ಕಿರ್ಗಿಜ್óಸ್ತಾನದಲ್ಲಿ ಒಂದು ಮಾಹಿತಿ ತಂತ್ರಜ್ಞಾನ ತರಬೇತಿ ಕೇಂದ್ರವನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರ ಸಚಿವಾಲಯದ ಪರವಾಗಿ ನಿರ್ಮಿಸಲಿದೆ.
ಎಚ್‍ಎಮ್‍ಟಿ ಬೇರಿಂಗ್ಸ್ ಸಂಸ್ಥೆ :

	ಹೈದರಾಬಾದಿನಲ್ಲಿ ಜಪಾನಿನ ಕೋಯೊ ಸಂಸ್ಥೆಯ ಸಹಯೋಗದಲ್ಲಿ ನಿರ್ಮಿತಗೊಂಡಿದ್ದ ಇಂಡೋ ನಿಪ್ಪಾನ್ ಬೇರಿಂಗ್ಸ್ ಸಂಸ್ಥೆ. ಈಗ ಎಚ್‍ಎಮ್‍ಟಿ ಸಂಸ್ಥೆಯ ಸಂಪೂರ್ಣ ಸ್ವಾಮ್ಯದ ಒಂದು ಘಟಕವಾಗಿದೆ. ಸಾರ್ವಜನಿಕ ವಲಯದಲ್ಲಿರುವ ಏಕೈಕ ಬೇರಿಂಗ್ಸ್ ಘಟಕವಾಗಿರುವ ಎಚ್‍ಎಮ್‍ಟಿ ಬೇರಿಂಗ್ಸ್ ಸಂಸ್ಥೆ ವಿವಿಧ ವಾಹನಗಳಿಗೆ ಬೇಕಾಗುವ ಬೇರಿಂಗ್‍ಗಳನ್ನು ಉತ್ಪಾದಿಸುತ್ತಿದೆ.
ಪ್ರಾಗಾ ಯಂತ್ರೋಪಕರಣ ಸಂಸ್ಥೆ :

	1943ರಲ್ಲಿ ಸ್ಥಾಪಿತಗೊಂಡ ಪ್ರಾಗಾ ಯಂತ್ರೋಪಕರಣ ಸಂಸ್ಥೆ ದೇಶದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಇದ್ದು ಈಗ ಎಚ್‍ಎಮ್‍ಟಿ ಸಂಸ್ಥೆಯು ಸಂಪೂರ್ಣ ಸ್ವಾಮ್ಯದ ಒಂದು ಘಟಕವಾಗಿದೆ.
ಸಮಾಪ್ತಿ

	ಕಳೆದ ಐವತ್ತು ವರ್ಷಗಳಿಂದ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಮಾಡಿ ನಾಡಿನ ಕೈಗಾರಿಕಾ ಕ್ರಾಂತಿಗೆ, ಹಸಿರು ಕ್ರಾಂತಿಗೆ, ಆಪರೇಷನ್ ಫ್ಲಡ್ (ಹಾಲು ಉತ್ಪಾದನೆಯ ಕ್ರಾಂತಿ)ಯಲ್ಲಿ ಹರಿಕಾರನಾಗಿ ಎಚ್‍ಎಮ್‍ಟಿ ಸಂಸ್ಥೆಯು ನಾಡಿಗೆ ನೀಡಿರುವ ಕೊಡುಗೆ ಅದ್ವಿತೀಯ. ನಾಡಿನ ಮೂಲೆಮೂಲೆಗಳಲ್ಲಿ ತಾನು ಸರಬರಾಜು ಮಾಡಿದ ಸಾಮಗ್ರಿಗಳಿಗೆ ಸೇವಾ ಬೆಂಬಲವನ್ನು ನೀಡಬಲ್ಲ ಏಕೈಕ ಸಂಸ್ಥೆ ಎಚ್‍ಎಮ್‍ಟಿ.

	ಎಲ್ಲೆಲ್ಲಿ ಕೈಗಾರಿಕಾ ಸಾಮಗ್ರಿಗಳ ಬೇಡಿಕೆಯಿದೆಯೋ ಅಲ್ಲೆಲ್ಲಾ ನಿಮಗಾಗಿ ಎಚ್‍ಎಮ್‍ಟಿ ಇದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

				(ಎನ್.ಡಿ.ವೀರಣ್ಣಗೌಡ)